ಪೂರ್ಣಯ್ಯ
1746-1812. ಹಳೆಯ ಮೈಸೂರು ಸಂಸ್ಥಾನದ ದಕ್ಷ ಆಡಳಿತಗಾರ; ಪ್ರಸಿದ್ಧ ದಿವಾನರಲ್ಲಿ ಒಬ್ಬ. ಇವನ ಬಾಲ್ಯ ಮತ್ತು ಅಧಿಕಾರದ ಪ್ರಾರಂಭ ಕಾಲಕ್ಕೆ ಸಂಬಂಧಿಸಿದ ವಿವರಗಳು ಸ್ಪಷ್ಟವಾಗಿಲ್ಲ. ಬಾಲ್ಯದಲ್ಲಿ ಅನ್ನದಾನಶೆಟ್ಟಿ (ಅಂದಾನ್ ಶೇಟ್) ಎಂಬ ಲೇವಾದೇವಿಗಾರನಲ್ಲಿ ಮಾಹೆಯಾನ ಎರಡು ಹೊನ್ನಿನ ತಲಬಿನ ಮೇಲೆ ಕಾರಕೂನನಾಗಿದ್ದನೆಂದೂ ಒಂದು ಸಂದರ್ಭದಲ್ಲಿ ಈತ ಹೈದರ್ ಆಲಿಯ ಕಣ್ಣಿಗೆ ಬಿದ್ದನೆಂದೂ ಉಲ್ಲೇಖವಿದೆ. ಪೂರ್ಣಯ್ಯನ ಚತುರತೆಯನ್ನೂ ಕನ್ನಡದಲ್ಲಿ ಲೆಕ್ಕಪತ್ರವಿಡುವುದರಲ್ಲಿ ಇವನ ಜಾಣ್ಮೆಯನ್ನೂ ಗಮನಿಸಿದ ಹೈದರ್ ಇವನನ್ನು ಆ ಶೆಟ್ಟಿಯಿಂದ ಬಿಡಿಸಿಕೊಂಡು ತನ್ನ ತೋಷಿಖಾನೆಯಲ್ಲಿ ಕನ್ನಡ ಲೆಕ್ಕಿಗನಾಗಿ 1768ರ ಸುಮಾರಿನಲ್ಲಿ ನೇಮಿಸಿಕೊಂಡ. ಬೆಂಗಳೂರಿನಲ್ಲಿ ಅಸಾದ್ ಆಲಿ ಎಂಬುವನ ಶಿಫಾರಸ್ಸಿನ ಮೇಲೆ ಹೈದರ್ ಪೂರ್ಣಯ್ಯನನ್ನು ನೇಮಿಸಿಕೊಂಡುದಾಗಿ ಹೈದರ್ ನಾಮಾದಿಂದ ತಿಳಿದುಬರುತ್ತದೆ. ಕ್ರಮೇಣ ಪೂರ್ಣಯ್ಯನ ಬುದ್ಧಿವಂತಿಕೆಗೆ ಮಾರುಹೋದ ಹೈದರ್ ಅವನಿಗೆ ಚಿನ್ನದ ಮುಲಾಮು ಹಾಕಿದ ಛತ್ರಿಯನ್ನು ಕೊಟ್ಟು ಗೌರವಿಸಿ ಮೇಲಿನ ಹುದ್ದೆಗಳಿಗೆ ಬಡ್ತಿ ಕೊಟ್ಟ. ತೋಷಿಕಾನೆಯ ಮುಖ್ಯನಾಗಿದ್ದ ಪೂರ್ಣಯ್ಯ ಬಳ್ಳಾರಿ ಪ್ರದೇಶದ ಮೇಲೆ ಹೈದರ್ ನಡೆಸಿದ ದಂಡಯಾತ್ರೆಯಲ್ಲಿ ಪಾಲ್ಗೊಂಡಿದ್ದ (1775). ಅನಂತರ ಅಂಚೆ ರಾಮಯ್ಯನ ದೆಸೆಯಿಂದ ವಿಪತ್ತು ಒದಗಲಿದ್ದಾಗ ಬಾಚಾರಾವ್, ಅನ್ನದಾನಶೆಟ್ಟಿ ಹಾಗೂ ಇತರರ ನೆರವಿನಿಂದ ಪೂರ್ಣಯ್ಯ ಪಾರಾದ. 1779ರಲ್ಲಿ ಹೈದರನ ಮಗಳು ಹಾಗೂ ಎರಡನೆಯ ಮಗನ ವಿವಾಹಗಳಲ್ಲಿ ಭಾಗವಹಿಸಿದ್ದ. 1780 ರಿಂದ 1782ರ ತನಕ ನಡೆದ ಕರ್ನಾಟಕ ಯುದ್ಧದಲ್ಲಿ ಪೂರ್ಣಯ್ಯ ಹೈದರನ ಮಂತ್ರಿ ಹಾಗೂ ದಳಪತಿಯಾಗಿದ್ದ ಹೈದರ್ ಸ್ವಲ್ಪ ಕಾಲ ಅಸ್ವಸ್ಥನಾಗಿದ್ದಾಗ ಅವನ ಜೊತೆಗಿರುತ್ತಿದ್ದವನು ಪೂರ್ಣಯ್ಯ ಮಾತ್ರ. ಹೈದರ್ ಮರಣ ಹೊಂದಿದಾಗ ಟಿಪ್ಪು ಮಲಬಾರಿನಲ್ಲಿ ಕಾಳಗದಲ್ಲಿ ನಿರತನಾಗಿದ್ದ. ಟಿಪ್ಪು ಹಿಂದಿರುಗುವವರೆಗೂ ಹೈದರನ ಮರಣದ ಸುದ್ದಿಯನ್ನು ಪೂರ್ಣಯ್ಯ ಗೋಪ್ಯವಾಗಿಟ್ಟಿದ್ದು, ಅವನು ಬಂದಾಗ ಹೈದರನ ಆಶಯಗಳನ್ನು ಟಿಪ್ಪುವಿಗೆ ತಿಳಿಸಿದ. ಟಿಪ್ಪು ಅಧಿಕಾರ ವಹಿಸಿದ ಕೂಡಲೇ ಅವನ ಮಂತ್ರಿ ಹಾಗೂ ಸೇನಾನಿಯಾಗಿ ಯುದ್ಧಗಳಲ್ಲಿ ಭಾಗವಹಿಸಿದ್ದ. ಪೂರ್ಣಯ್ಯನ ದಕ್ಷತೆಯಿಂದ ಸಂಪ್ರೀತನಾದ ಟಿಪ್ಪು ಇವನಿಗೆ 1794ರಲ್ಲಿ ಮೀರ್ ಮೀರಾನ್ ಎಂಬ ಬಿರುದನ್ನಿತ್ತು ಗೌರವಿಸಿದ. ನಾಲ್ಕನೆಯ ಮೈಸೂರು ಯುದ್ಧದಲ್ಲಿ (1799) ಟಿಪ್ಪುವಿನ ದಳಪತಿಗಳಲ್ಲೊಬ್ಬನಾಗಿ, ಮಳವಳ್ಳಿಯ ಜನರಲ್ ಹ್ಯಾರಿಸ್ಸನ ವಿರುದ್ಧ ಪೂರ್ಣಯ್ಯ ಹೋರಾಡಿದ. ಶ್ರೀರಂಗಪಟ್ಟಣದ ಮುತ್ತಿಗೆಯಲ್ಲಿ ಟಿಪ್ಪುವಿನೊಡನೆ ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಭಾಗವಹಿಸಿದ್ದ. ಟಿಪ್ಪುವಿನ ಮರಣಾನಂತರ ಅವನ ಮಕ್ಕಳೊಡನೆ ಬ್ರಿಟಿಷರಿಗೆ ಶರಣಾದ. ಟಿಪ್ಪುವಿನ ಮಕ್ಕಳಿಗೆ ರಾಜ್ಯ ನೀಡಬೇಕೆಂದು ಬ್ರಿಟಿಷರಿಗೆ ಪೂರ್ಣಯ್ಯ ಕೋರಿಕೆ ಸಲ್ಲಿಸಿದ. ಬ್ರಿಟಿಷರು ಮೈಸೂರಿನ ಒಡೆಯ ಸಂತತಿಯ ಹಕ್ಕನ್ನು ಪ್ರತಿಪಾದಿಸಿ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ರಾಜ್ಯವನ್ನು ಕೊಟ್ಟು ಪೂರ್ಣಯ್ಯನನ್ನು ದಿವಾನನಾಗಿ ನೇಮಿಸಿದರು. ಬಾಲಕ ಕೃಷ್ಣರಾಜನಿಗೆ ಪೂರ್ಣಯ್ಯನೇ ಪಾಲಕನಾಗಿಯೂ ನೇಮಕಗೊಂಡ. 

	ಪೂರ್ಣಯ್ಯ 11 ವರ್ಷಗಳ ಕಾಲ ದಿವಾನನಾಗಿ ವಿಚಕ್ಷಣೆಯಿಂದ ಆಡಳಿತ ನಿರ್ವಹಿಸಿದ. ಚಿಕ್ಕ ವಯಸ್ಸಿನ ರಾಜಕುಮಾರನಿಗೆ ರಾಜಯೋಗ್ಯ ಶಿಕ್ಷಣ ಏರ್ಪಡಿಸಿದ. ಆಡಳಿತದಲ್ಲಿ ಅನೇಕ ಪ್ರಗತಿಪರ ಸುಧಾರಣೆಗಳು ಜಾರಿಗೆ ಬಂದುವು. ಸಂಸ್ಥಾನವನ್ನು ಅಷ್ಟಗ್ರಾಮ, ಚಿತ್ರದುರ್ಗ ಮತ್ತು ಬಿದನೂರು ಎಂಬ ಮೂರು ವಿಭಾಗಗಳಾಗಿ ಮಾಡಿ, ಪ್ರತಿ ವಿಭಾಗಕ್ಕೂ ಒಬ್ಬ ಸುಭೇದಾರನನ್ನು ನೇಮಿಸಿದ್ದ. ಈ ವಿಭಾಗಗಳೊಳಗಿನ ಆಡಳಿತ ಘಟಕಗಳು ತಾಲ್ಲೂಕುಗಳ ಆಡಳಿತ ಪ್ರತಿ ತಾಲ್ಲೂಕಿಗೂ ಒಬ್ಬ ಅಮಲ್ದಾರ ಇರುತ್ತಿದ್ದ. ನಾಗರಿಕ ಆಡಳಿತವನ್ನು ಅಡಳಿತ, ಆರ್ಥಿಕ ಹಾಗೂ ರಾಜಾದಾಯ ಎಂಬುದಾಗಿ ವಿಭಾಗಿಸಿದ. ಸೈನ್ಯದಲ್ಲಿ ಅಶ್ವದಳ ಮತ್ತು ಪದಾತಿದಳಗಳಿದ್ದುವು. ದಿವಾನ ಎಲ್ಲ ವಿಭಾಗಗಳ ಹಾಗೂ ಇಲಾಖೆಗಳ ಮೇಲಧಿಕಾರಿಯಾಗಿದ್ದ. ಅರಮನೆ ರಾಣಿ ಲಕ್ಷ್ಮಮ್ಮಣ್ಣಿಯ ಆಡಳಿತಕ್ಕೊಳಪಟ್ಟಿತ್ತು. ಪೂರ್ಣಯ್ಯನ ಆಡಳಿತ ಮತ್ತು ಆರ್ಥಿಕ ಸುಧಾರಣೆಗಳಿಂದ ಸಂಸ್ಥಾನದಲ್ಲಿ ಸುಭಿಕ್ಷ ಉಂಟಾಯಿತು. ಅಲ್ಲಲ್ಲಿ ತಲೆದೋರಿದ ದಂಗೆಗಳನ್ನು ಪೂರ್ಣಯ್ಯ ಯಶಸ್ವಿಯಾಗಿ ಅಡಗಿಸಿದ. ಅನೇಕ ಹೊಸ ಕಾನೂನುಗಳು ಜಾರಿಗೆ ಬಂದುವು. ವಿಶೇಷ ಮೊಕದ್ದಮೆಗಳನ್ನು ದಿವಾನನೇ, ರೆಸಿಡೆಂಟನ ಸಲಹೆಯನ್ನು ಪಡೆದು, ನಿರ್ವಹಿಸುತ್ತಿದ್ದ. 1803ರಲ್ಲಿ ಬ್ರಿಟಿಷರು ಮರಾಠರೊಡನೆ ಯುದ್ಧದಲ್ಲಿ ತೊಡಗಿದಾಗ ಪೂರ್ಣಯ್ಯ ಬ್ರಿಟಿಷರಿಗೆ ಸೇನೆ, ಹಣ ಮತ್ತು ದವಸವನ್ನೊದಗಿಸಿ ಸಹಕರಿಸಿದ. ಇವನು ಸಂಸ್ಥಾನದಲ್ಲಿ ಆಗಾಗ ಸಂಚರಿಸಿ ಜನರ ಕುಂದುಕೊರತೆಗಳನ್ನು ಅರಿತು ಅವುಗಳ ನಿವಾರಣೆಗೆ ಪ್ರಯತ್ನಿಸಿದ. ಅನೇಕ ಹಳೆಯ ಕೆರೆ ಕಾಲುವೆಗಳು ದುರಸ್ತಿಗೊಂಡವು. ಹೊಸ ಕೆರೆಗಳು ನಿರ್ಮಿತವಾದುವು. ಮೈಸೂರಿನ ಸಮೀಪದ ಸಾಗರಕಟ್ಟೆಯ ಬಳಿಯಲ್ಲಿ ಲಕ್ಷ್ಮಣತೀರ್ಥ ನದಿಗೆ ಅಣೆಕಟ್ಟೆಯ ನಿರ್ಮಾಣವಾಯಿತು. ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿಗೆ ವೆಲ್ಲಸ್ಲಿಯ ಹೆಸರಿನಲ್ಲಿ ಸೇತುವೆಯನ್ನು ಕಟ್ಟಲಾಯಿತು. ಸಿಡುಬು ರೋಗಕ್ಕೆ ಚಚ್ಚುಮದ್ದನ್ನು ಸಂಸ್ಥಾನದಲ್ಲಿ ಪ್ರಥಮವಾಗಿ ಪ್ರಯೋಜಿಸಲಾದ್ದು ಪೂರ್ಣಯ್ಯನ ಆಡಳಿತ ಕಾಲದಲ್ಲಿ.

	ಪೂರ್ಣಯ್ಯನ ಆಡಳಿತ ದಕ್ಷತೆಯನ್ನು ಮೈಸೂರು ಸಂಸ್ಥಾನದ ರೆಸಿಡೆಂಟ್ ಬ್ಯಾರಿ ಕ್ಲೋಸ್ ಹಾಗೂ ಗವರ್ನರ್ ಜನರಲ್ ವೆಲ್ಲಸ್ಲಿ ಪ್ರಶಂಸಿಸಿದ್ದಾರೆ. ದಿವಾನ್ ಪದವಿಯನ್ನು ತನ್ನ ಮನೆತನಕ್ಕೆ ವಂಶಪಾರಂರ್ಪವಾಗಿ ಅನುಗ್ರಹಿಸಬೇಕೆಂದು ಬ್ರಿಟಿಷ್ ಸರ್ಕಾರಕ್ಕೆ ಪೂರ್ಣಯ್ಯ ಪ್ರಾರ್ಥನೆ ಸಲ್ಲಿಸಿದ್ದ. ಆದರೆ ಇದಕ್ಕೆ ಮನ್ನಣೆ ದೊರೆಯಲಿಲ್ಲ. ಯಳಂದೂರು ತಾಲ್ಲೂಕನ್ನು ಇವನಿಗೆ ಜಹಗೀರಾಗಿ ನೀಡಲಾಯಿತು. ಪೂರ್ಣಯ್ಯ 1811ರಲ್ಲಿ ದಿವಾನ ಪದವಿಯಿಂದ ನಿವೃತ್ತನಾದ. 1812ರಲ್ಲಿ ತೀರಿಕೊಂಡ. 													(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ